Thursday, January 9, 2020

ಕರ್ಮ

ನಮ್ಮ ಕರ್ಮಕ್ಕೆ ತಕ್ಕಂತೆ ಫಲ . ಮನುಷ್ಯನು ಪ್ರಾಣಿ ಜೀವ ಬಳಿ ತೆಗೆದುಕೊಂಡು ಸಹ ಜೀವನ ಮಾಡಬಹುದು ಆದರೆ ಅದಕ್ಕೆ ತಕ್ಕಂತೆ ಫಲವನ್ನು ಇಟ್ಟಿರುತ್ತಾನೆ ಎಂದು ಭಗವದ್ಗೀತೆಯಲ್ಲಿ ಹೇಳಿದೆ. ಪುಣ್ಯ ಕೆಲಸಗಳಿಗೂ ಅದರದ್ದೇ ಫಲ ಇರುತ್ತದೆ . ಅಪ್ಪಿ ತಪ್ಪಿ ಗೊತ್ತಾಗ್ದೇ ಮಾಡೋ ಕರ್ಮಕ್ಕೂ ಫಲ ಇದ್ದೇ ಇದೆ . ಇನ್ನು ಗೊತ್ತಾಗಿ ಪ್ರಾಣಿ ಹತ್ಯೆ ಮಾಡಿದರೆ ಫಲ ಕ್ರೂರವಾಗಿ ಇದ್ದೇ ಇರುತ್ತೆ . ಅದನ್ನೇ ತಾನೇ ನಾವು ಅನುಭವಿಸುತ್ತಿರುವುದು ನಾವು ಮಾಡಿರೋ ಕರ್ಮದ ಫಲವನ್ನೇ .... ಮೇಲೆ ಯಾರು ಕೂತಿಲ್ಲ ಲೆಕ್ಕ ಬರ್ಕೊಂಡು ... ನಮ್ಮ ಲೆಕ್ಕ ಪಾಪ ಪುಣ್ಯದ ಲೆಕ್ಕ ನಾವೇ ಬರ್ಕೊತಾ ಇರ್ತೀವಿ ಅದರ ತುಲನೆ ವಿಶ್ಲೇಷಣೆ ಯಮ ಧರ್ಮರಾಯ ನಮ್ಮ ದೇಹದಿಂದ ಪ್ರಾಣವನ್ನು ಕಸಿದುಕೊಂಡು ಹೋಗುವಾಗ ಮುಂದಿನದ್ದು ತೀರ್ಮಾನವಾಗುತ್ತೆ ಅಂತೇ ಕಥೆಯ ರೂಪದಲ್ಲಿ ತಿಳಿಸಿದ್ದಾರೆ . ಅದಕ್ಕೆ ಹಿರಿಯರು ಹೇಳಿದ್ದು ಪುಣ್ಯದ ಕೆಲಸ ಮಾಡಿ ಪುಣ್ಯದ ಜೀವನ ಮತ್ತೆ ಪಡ್ಕೊಳಿ ಅಂತ ಇಲ್ಲ ಅಂದ್ರೆ ನೆಮ್ಮದಿಯ ಬದುಕು ಖಂಡಿತ ಸಿಗಲ್ಲ ಅಂತ ....

Sunday, January 5, 2020

ನನ್ನ ಬದುಕಿನ ಸ್ಫೂರ್ತಿ ಡಿ. ವಿ.ಗುಂಡಪ್ಪನವರ "ಮಂಕುತಿಮ್ಮನ ಕಗ್ಗ"


ನಾವು ಬದುಕಿ ಬಂದ ದಾರಿಯನ್ನು ಯಾವತ್ತೂ ಯಾವ ಕಾರಣಕ್ಕೂ ಮರೆಯಬಾರದು ಅಂತ ಹಿರಿಯರು ಹೇಳುತ್ತಾರೆ . ನಾವು ನಡೆದು ಬಂದ ದಾರಿಯನ್ನು ನೆನಪಿಡಬೇಕು. ಹಿಂದೆ ಇದ್ದ ಕಷ್ಟ ಇವತ್ತಿಗಿಲ್ಲ , ಇವತ್ತಿನ ಕಷ್ಟ ಮುಂದೆ ಬರುವುದಿಲ್ಲ ಆದರೆ ಬದುಕು ನಮಗೊಡ್ಡುವ ಕಷ್ಟ ಕಾರ್ಪಣ್ಯಗಳು, ಸವಾಲುಗಳನ್ನು ಧೈರ್ಯವಾಗಿ ಎದುರಿಸಿದರೆ ಅದರಿಂದ ಕಲಿಕೆ ಹೆಚ್ಚಾಗಿ ಬದುಕಿಗೆ ಬೇಕಿರುವ ಜ್ಞಾನ ಅಭಿವೃದ್ದಿಯಾಗುತ್ತದೆ .
ಇಪ್ಪತ್ತನಾಲ್ಕು ಇಪ್ಪತೈದಕ್ಕೆ ಅಲ್ಪ ಸ್ವಲ್ಪ ಬುದ್ದಿ ಬಂದ ಮೇಲೆ ರಾಗಿಗುಡ್ಡದಲ್ಲಿ ಹೋಗಿ ಪ್ರವಚನ ಕೇಳುತ್ತಾ ಇದ್ದೆ - ಅಲ್ಲಿ ಚಿನ್ಮಯ ಮಿಷನ್ ನ ಬ್ರಹ್ಮಾನಂದರು ಪ್ರವಚನ ಕೊಡ್ತಾ ಇದ್ರು. ಕೂತೆ ಸ್ವಲ್ಪ ಇರ್ಲಿ ಅಂತ, ಎಂತಾ ಪ್ರವಚನ , ಎಂತಾ ಜ್ಞಾನಬಂಡಾರ ಅವರು - ಕಗ್ಗದ ಸಾರವನ್ನು ಬಿಡಿ ಬಿಡಿಯಾಗಿ ವಿವರಿಸುತ್ತಿದ್ದರು . ಅವತ್ತಿಗೆ ಸಿಕ್ಕಿದ್ದು ಕೊಟಿ ಸಿಕ್ಕ ಹಾಗೆ ಅನುಭವ . ಇವತ್ತಿಗೂ ಅವರ ಸಿ ಡಿ ಕೇಳುತ್ತೇನೆ.
ನನ್ನ ತಲೆ ಮೇಲೆ ಏನೋ ಭಾರ ಬಿದ್ದಂತೆ ಆದಾಗಲೆಲ್ಲಾ ನಾನು "ಭಗವದ್ಗೀತೆಯ ಸಾರ" "ಮಂಕುತಿಮ್ಮನ ಕಗ್ಗ" ಕೃತಿಯ ಮೊರೆ ಹೊಕ್ಕುತ್ತೇನೆ. ೩೦ ನಿಮಿಷ ಕೇಳುವುದರೊಳಗೆ ನಾನೇನಾ ಅಳ್ತಾ ಇದ್ದಿದ್ದು ಅನ್ನುವಷ್ಟು ಜ್ಞಾನ ಸಂಪಾದನೆ ಆಗುತ್ತದೆ. 
ತತ್ವ ಜ್ಞಾನದ ಉತ್ಕೃಷ್ಟ ಕೃತಿ ಮಂಕುತಿಮ್ಮನ ಕಗ್ಗ -ಇದನ್ನು ಕನ್ನಡದ ಭಗವದ್ದ್ಗೀತೆ ಎಂದು ಹೇಳುತ್ತಾರೆ . ಇದರ ಜ್ಞಾನ ಸಿಕ್ಕಾಗಲೆಲ್ಲಾ ನನಗೆ ಬೆಲ್ಲದ ಉಂಡೆ ಸಿಕ್ಕಷ್ಟೇ ಸಂತೋಷವಾಗುತ್ತದೆ . ಆ ಕೃತಿಗಳು ಇರುವುದು ನಮಗೆ ಅರವತ್ತು ಎಪ್ಪತ್ತು ಆಗಿ ಮನೆಯಲ್ಲಿ ಕೂತಾದ ಮೇಲಲ್ಲ ಇಪ್ಪತ್ತೈದರಿಂದಲೇ ಬೇಕಿರುವುದು . ನನ್ನ ಬದುಕು ಕೂಡ ಹಾಗೆಯೇ , ವಿಷಮ ಪರಿಸ್ಥಿತಿಗಳು ಎದುರಾದಾಗ ಆ ಕ್ಷಣದಲ್ಲಿ ವಿಪರೀತ ದುಖ:ವಾಗುತ್ತದೆ ಆದರೆ ಇವತ್ತಿಗೆ ಅಲ್ಪ ಸ್ವಲ್ಪ ಜೀವನಾನುಭವದಿಂದ ಮತ್ತು ಕಗ್ಗದಿಂದ ಪಡೆದುಕೊಂಡಿರುವ ಜ್ಞಾನದಿಂದ ಹೇಳ್ತೀನಿ ಕಷ್ಟ ಅನ್ನುವುದು ನಮ್ಮ ಒಳಿತಿಗಾಗಿ ಮಾತ್ರವೇ ಬರುವುದು, ನಮಗೆ ಬದುಕಿನ ಪಾಠ ಕಲಿಸಿಕೊಡಲು ಬರುವುದು ಎಂದು ಭಾವಿಸಿದ್ದೇನೆ , ಅದನ್ನು ದೇವರು ಕೊಡುವುದು ಅಂತ ದೂಶಿಸಬಾರದು ಅದರ ಬದಲು ಪರಿಸ್ಥಿತಿಯನ್ನು ಎದುರಿಸುವ ಜ್ಞಾನ ಸಂಪಾದನೆ ಮಾರ್ಗ ಹಿಡಿಯುವುದು ಉತ್ತಮ. ಮುಂದೆ ಚೆನ್ನಾಗಿ ಬಾಳಲಿ ಎಂದುಕೊಂಡು ಹಲವಾರು ಕಷ್ಟಗಳು ಬಂದು ನನಗೆ ಪಾಠ ಕಲಿಸಿದೆ . ಕಷ್ಟ ನಷ್ಟ ಅನುಭವಿಸದ ವ್ಯಕ್ತಿಯೇ ಈ ಪ್ರಪಂಚದಲ್ಲಿಲ್ಲ. ಕಲಿಕೆ ತುಂಬಾ ಮುಖ್ಯ ಮತ್ತು ಯಾವತ್ತು ನಿಲ್ಲಬಾರದು ಅನ್ನುವುದು ನನ್ನ ಹಠ. ನಾನು ಎಲ್ಲಾ ಕಲಿತಿದ್ದೇನೆ ಎಂದರೆ ನನ್ನಷ್ಟು ದೊಡ್ಡ ಮೂರ್ಖ ಜಗತ್ತಿನಲ್ಲಿ ಇನ್ನೊಬ್ಬನಿಲ್ಲ . ನಮ್ಮ ಬದುಕೇ ನಮಗೆ ಹೆಚ್ಚು ಪಾಟ ಕಲಿಸುತ್ತಾ ಹೋಗುತ್ತದೆ , ಅದರಿಂದ ಕಲಿತು ಸಂದರ್ಭಕ್ಕನುಸಾರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಅದರಂತೆಯೇ ನಮ್ಮ ಬದುಕು ರೂಪುಗೊಳ್ಳುತ್ತಾ ಹೋಗುತ್ತದೆ . ಯಾವುದೇ ನಿರ್ಧಾರ ತೆಗೆದುಕೊಳ್ಳಲು ನಮ್ಮೊಳಗಿನ ಜ್ಞಾನ ಸಹಾಯ ಮಾಡಬೇಕು , ಸಹಾಯ ಮಾಡುತ್ತಾ ಇಲ್ಲ ಎಂದರೆ ಇನ್ನೂ ಜೀವನದ ಅನುಭವಗಳಿಂದ ಪಕ್ವ ಆಗಿಲ್ಲ ಎಂದಷ್ಟೇ ಅರ್ಥ . 
ನಡೆದುಬಂದ ದಾರಿಯನು ಹಾಗೆ ಸುಮ್ನೆ ಮೆಲುಕು ಹಾಕಿ ಆತ್ಮಾವಲೋಕನ ಮಾಡಿಕೊಂಡು ಭಗವಂತ ಅದೆಷ್ಟು ಚೆನ್ನಾಗಿ ಇಟ್ಟಿದನಲ್ಲಪ್ಪಾ ಎಂದು ಅವನನ್ನು ಮನಸ್ಸಿನ್ನಲ್ಲೇ ನೆನೆದು ಧನ್ಯತಾ ಭಾವದಿಂದ ಕಣ್ಣು ಮುಚ್ಚಿದೆ. ಘಳ ಘಳಾ ಅಂತ ಹೃದಯ ತುಂಬಿ ಕಣ್ಣಿಂದ ನೀರು ಕೆನ್ನೆಯ ಮೇಲೆ ಹರಿದಿತ್ತು . 
ಪ್ರತೀ ಅನುಭವಕ್ಕಿಂತ ಅನುಭವದೊಳಗಿರುವ ಸವಿಯೇ ಎಷ್ಟು ಚೆನ್ನ.
-ಸುಬ್ಬು ಪದ್ಮನಾಭ