ನೀನೊಬ್ಬ ಉತ್ತಮ ಮಗನಾಗಿ , ದೇವತೆಯಂತ ಹೆಂಡತಿಗೆ ಪ್ರೀತಿ ತೋರುವ ಗಂಡನಾಗಿ, ನನ್ನಮ್ಮ ತೀರಿಕೊಂಡ ಮೇಲೆ ಎರಡನೇ ಮದುವೆ ಮಾಡಿಕೊಳ್ಳುವ ಸಲಹೆಗಳನ್ನು ತಿರಸ್ಕರಿಸಿ ೫ ಜನ ಮಕ್ಕಳಿಗೆ ತಾಯಿ ಮತ್ತು ತಂದೆಯಾಗಿ, ಕಷ್ಟ ಪಟ್ಟು ೧೨-೧೩ ಗಂಟೆಗಳು ಕಬ್ಬಿಣದ ಕೆಲಸ ಮಾಡಿ ೫ ಮಕ್ಕಳನ್ನು ಸಾಕಿ ಸಲುಹಿ, ಒಬ್ಬರ ಹತ್ತಿರ ಒಂದು ಪೈಸೆ ಕೇಳದೆ ಮಕ್ಕಳನ್ನೂ ಸ್ನೇಹದಿ ಲಾಲಿಸಿ ಪಾಲಿಸಿದ ತಂದೆಯಾಗಿ, ಮೊಮ್ಮಕ್ಕಳ ಯೋಗಕ್ಷೇಮವನ್ನು ಕಾಯುವ ತಾತನಾಗಿ ಎಲ್ಲಾ ಪಾತ್ರಗಳನ್ನೂ ಆಚ್ಚುಕಟ್ಟಾಗಿ ಮಾಡಿ ಮುಗಿಸಿ ಹೊರಟೆ .
ಯಾರು ಎಷ್ಟು ಹಂಗಿಸಿದರೂ ಪ್ರತ್ಯುತ್ತರ ಕೊಡದೆ ಹೇಗಿದ್ದೆ ಅಂತ ನನಗೆ ಅವತ್ತಿಗೆ ತಿಳಿಯುತ್ತಿರಲಿಲ್ಲ ...ಕಾಲ ಕಳೆಯುತ್ತಾ ಬದುಕೇ ನನಗೆ ಅದರ ಮರ್ಮ ಕಲಿಸಿತು. ಯಾರು ಎಷ್ಟು ಹಿಂದೆ ಮಾತನಾಡಿಕೊಂಡರು ನಿನ್ನ ಎದುರೇ ನಿನ್ನನ್ನು ಪೆದ್ದ ಅಂದಿದ್ದೂ ನೋಡಿದೀನಿ ಕೇಳಿಸ್ಕೊಂಡಿದೀನಿ , ನಿನ್ನ ಪ್ರತ್ಯುತ್ತರ ನನ್ನ ಜೀವನಕ್ಕೇ ಮರೆಯದಂತಾ ಪಾಠ ಆಗೋಯ್ತಲ್ಲ ತಂದೆ . ನಾಳೆ ನೀನು ಓದಿ ಬರಹ ಕಲ್ತ ಮೇಲೆ ಯಾರು ಏನು ಅನ್ನಲ್ಲಪ್ಪ . ಅವರೇ ಗೌರವ ಕೊಡ್ತರೆ ಆ ದಿನಗಳೂ ಬರುತ್ತೆ ನೀನು ನೋಡ್ತೀಯ ನಾನು ನೋಡ್ತೀನಿ ಅಂತಿದ್ದೆ .
ನೋವಾದಾಗ ಸಂಕಟವಾದಾಗ ಜನರ ತುಚ್ಛ ಮಾತುಗಳನ್ನು ಕೇಳಿ ಬೇಸರವಾದಾಗ ಏನೂ ಗೊತ್ತಾಗಲ್ಲ ಅನ್ನೋ ತರಾ ಆ ಜಾಗ ಬಿಟ್ಟು ಬರ್ತಾ ಇದ್ದೆ . ಗೃಹವಸ್ತು ಭಂಡಾರಕ್ಕೆ ನಾವಿಬ್ರು ಮನೆಯ ದಿನಸಿ ತರಲು ಹೋಗುವಾಗ ನಾನು ನಿನ್ನನ್ನು ಪ್ರಶ್ನಿಸುತ್ತಿದ್ದೆ . ... ನಿನ್ನಿಂದ ಉತ್ತರ ಬರುತಿತ್ತು ಗೊತ್ತಾ ?
ಅವರ್ಯಾರೋ ಏನೋ ಅಂದ್ರು ಅಂತ ನಮ್ಮ ಮನಸ್ಸಿನ ನೆಮ್ಮದಿ ಕಳ್ಕೊಬಾರ್ದು ರಾಜ ,, ಅಂದವನೇ ದೊಡ್ಡವನಾಗಲಿ ಬಿಡಪ್ಪ ... ನೀನು ಓದು ಬರ್ಯೋ ತನಕ ಅಷ್ಟೇ ... ಆಮೇಲೆ ಯಾರು ಮಾತನಾಡಲ್ಲ ನೋಡ್ತಾ ಇರು ಅಂತಿದ್ದೆ .
ಅಷ್ಟೇ ಸಾಕು ನನಗೆ ಪುಸ್ತಕದ ಹುಳು ತರಹ ಆಗಿಬಿಟ್ಟೆ. ಎಲ್ಲದರಲ್ಲಿ 85 ಮೇಲೆಯೇ ಅಂಕಗಳು ....ಅವತ್ತೇ ನಿರ್ಧಾರ ಮಾಡ್ದೆ . ನಿನಗೆ ಹೇಗೆ ಬೇಕೋ ಹಾಗೇ ಇರ್ತೀನಿ ... ಅಂತ . ನನ್ನ ಸುತ್ತಾ ಮುತ್ತಾ ಇರುವ ಸಮಾಜ ನಿನ್ನನ್ನು ಆಡಬಾರದು ಹಾಗೇ ಮಾಡೋದೇ ನನ್ನ ಜೀವನದ ಗುರಿಯಾಗ್ಲಿ ಬಿಡಣ್ಣ ಅಂದಿದ್ದೆ . ನನಗೆ ವಯಸ್ಸು ೧೨ ಆಗ . ನೆನಪಿದ್ಯಪ್ಪಾ ?
ಅಷ್ಟೇ ಸಾಕು ನನಗೆ ಪುಸ್ತಕದ ಹುಳು ತರಹ ಆಗಿಬಿಟ್ಟೆ. ಎಲ್ಲದರಲ್ಲಿ 85 ಮೇಲೆಯೇ ಅಂಕಗಳು ....ಅವತ್ತೇ ನಿರ್ಧಾರ ಮಾಡ್ದೆ . ನಿನಗೆ ಹೇಗೆ ಬೇಕೋ ಹಾಗೇ ಇರ್ತೀನಿ ... ಅಂತ . ನನ್ನ ಸುತ್ತಾ ಮುತ್ತಾ ಇರುವ ಸಮಾಜ ನಿನ್ನನ್ನು ಆಡಬಾರದು ಹಾಗೇ ಮಾಡೋದೇ ನನ್ನ ಜೀವನದ ಗುರಿಯಾಗ್ಲಿ ಬಿಡಣ್ಣ ಅಂದಿದ್ದೆ . ನನಗೆ ವಯಸ್ಸು ೧೨ ಆಗ . ನೆನಪಿದ್ಯಪ್ಪಾ ?
ನಿನಗೆ Cancer ಕೇವಲ ನೆಪವಾಯಿತು ಆದರೆ ನನಗೆ ಅದೇ ದೇವರು ಕೊಟ್ಟ ಆಜ್ಞೆಯಾಯಿತು, ಅಪ್ಪನನ್ನು ಹೋಗಿ ನೋಡಿಕೊ ನಾನು ನಿನಗೆ ಅವಕಾಶ ಕೊಡುತ್ತಿದ್ದೇನೆ ಎಂದು ಅಂತರಾತ್ಮ ಒದ್ದಾಡುತ್ತಿತ್ತು .ನಿನ್ನ ಸೇವೆ ಮಾಡಲು ಅವಕಾಶ ಕೊಟ್ಟ ಪರಮಾತ್ಮನನ್ನ ಇದಕ್ಕೆ ಪ್ರತಿ ನಿತ್ಯ ಸ್ತುತಿಸಿ ಧನ್ಯವಾದ ಅರ್ಪಿಸುತ್ತಿದ್ದೇನೆ.
ಭೂಮಿಯ ಮೇಲೆ ಈಗ ಅದು ಮೂರು ವರ್ಷವಾಯಿತು ಅಪ್ಪ . ಸಿನಿಮಾ ಹೀರೋಗಳು ನನ್ನ ಬದುಕಿಗೆ ಆದರ್ಶ ಆಗಲಿಲ್ಲ , ನೀನು ನನ್ನ ಬದುಕಿಗೆ ನಿಜವಾದ ಹೀರೋ -ಆದರ್ಶ.
ನೀನು ಹೇಳಿಕೊಟ್ಟ ಪಾಠ ನಡೆದುಕೊಂಡ ರೀತಿ ತೋರಿಸಿಕೊಟ್ಟ ಆದರ್ಶ ನನ್ನ ಹೃದಯದಲ್ಲಿ ಚಿಗುರೊಡೆದು ಹೆಮ್ಮರವಾಗಿ ಬೆಳೆಯುತ್ತಿದೆ . ನೀನು ನನ್ನ ಅಪ್ಪನಾಗಿ ನನ್ನ ಪಾಲಿಗೆ ದೇವರ ಸಮನಾಗಿಬಿಟ್ಟೆ . ದಿನ ಕಳೆದಂತೆ ನಿನ್ನ ಹಾಗೇ ಆಗುತ್ತಿದ್ದೇನೆ .
ಸುತ್ತ ಮುತ್ತ ಇರುವ ನೆಂಟರಿಷ್ಟರು ಸ್ನೇಹಿತರು ಎಲ್ಲರಿಗೂ ನಿನ್ನ ಹಾಗೆ ಕೈಮುಗಿಯುವ ಪ್ರವೃತ್ತಿ ಬಂದುಬಿಟ್ಟಿದೆ . ಚಿಕ್ಕವನಿದ್ದಾಗ ನಾನೇ ನಿನಗೆ ಹೇಳುತ್ತಿದ್ದೆ ಎಲ್ಲರಿಗೆ ಕೈ ಯಾಕೆ ಮುಗಿತೀಯ ದೇವರಿಗೆ ಮುಗಿ ಸಾಕು ಎಂದು . ಅದಕ್ಕೆ ನೀನು ದೇವರು ಎಲ್ಲರಲ್ಲೂ ಇದ್ದಾನೆ ಎಂಬ ತಿಳುವಳಿಕೆ ಬಂದರೆ ನೀನು ಹಾಗೆ ಮಾಡುತ್ತೀಯಾ ಸ್ವಲ್ಪ ಹೆಚ್ಚಿನ ಸಂಸಾರದ ಅನುಭವವಾಗಲಿ ತಡಿ ಎಂದು ನೀ ಹೇಳುತ್ತಿದ್ದೆ . ಅದು ನೂರಕ್ಕೆ ನೂರು ನನ್ನ ಅನುಭವಕ್ಕೆ ಈಗಾಗಲೇ ಬಂದು ಬಿಟ್ಟಿದೆ.
ನಿನ್ನನ್ನು ನೆನೆಯದ ದಿವಸವೇ ಇಲ್ಲವಲ್ಲ ಅಷ್ಟು ನನ್ನ ಮನದಾಳದಲ್ಲಿ ಬೇರು ಬಿಟ್ಟಿದೀಯಪ್ಪ .
ಇಂದು ಮೂರನೇ ವರ್ಷದ ಶ್ರಾದ್ಧ ಮಾಡಿ ನಿನ್ನನ್ನು ಸೇರಿ ಮೂರು ತಲೆ ಮಾರಿನವರೆಲ್ಲರೂ ಚೆನ್ನಾಗಿರಿ ಎಂದು, ಎರಡು ಹೊತ್ತು ಊಟ ಖಂಡಿತ ಸಿಗಲಿ , ಎಲ್ಲೇ ಇದ್ದರು ಸ್ನೇಹ ಪ್ರೀತಿ ಸಿಗಲಿ ಅಂತ ಅಷ್ಟೇ ಕೇಳುವುದು ನನಗೆ ಗೊತ್ತಿರೋದು .
ಆ ದೇವರಿಗೆ ದಿನನಿತ್ಯ ಇನ್ನೂ ಕೇಳ್ತಾನೆ ಇರ್ತೀನಿ ನನ್ನ ಅಪ್ಪನನ್ನು ಚೆನ್ನಾಗಿಟ್ಟಿರು ತಂದೆ ಅಂತ ... ಭಗವಂತ ಖಂಡಿತ ನಿನ್ನನ್ನು ಚೆನ್ನಾಗಿಟ್ಟಿರ್ತಾನೆ ಅಣ್ಣ. ಪುನರಪಿ ಜನನಂ ಪುನರಪಿ ಮರಣಂ ಅಂತ ಜಗದ್ಗುರುಗಳೇ ಹೇಳಿದ್ದಾರಲ್ಲ ... ಇಂದು ಶ್ರಾದ್ದ ಮಾಡಿ ಪಿಂಡ ಇಡುವಾಗ ಬಹಳ ಭಕ್ತಿ ಭಾವದಿಂದ ನಿನ್ನ ಮುಖವನ್ನೇ ಅಂತರಂಗದಲ್ಲಿ ಕಂಡು ಪ್ರಾರ್ಥಿಸಿದ್ದೇನೆ ಅಪ್ಪ.
ಮುಂದೆ ಜನ್ಮ ನನಗಿದ್ದರೆ ನನ್ನ ತಂದೆಯಾಗಿ ನೀನೆ ಬೇಕು🙏
-ನೀನು ಮತ್ತೆ ನನ್ನಮ್ಮ ಕುಕ್ಕೆ ಸುಬ್ರಹ್ಮಣ್ಯನಲ್ಲಿ ಹರಸಿಕೊಂಡು ಹುಟ್ಟಿದ ಸುಪುತ್ರ : ಸುಬ್ರಮಣ್ಯ ಪದ್ಮನಾಭ ( Picture taken 8 days before my father left his mortal body behind )



