Sunday, July 25, 2021

ನಾಗರಪಂಚಮಿ ವಿಶೇಷ

 ನಾಗರಪಂಚಮಿ ವಿಶೇಷ

-------------------
ತಡವಾಗಿ ಬರೆದಿರುವುದಕ್ಕೆ ಕ್ಷಮೆ ಇರಲಿ .
ಪ್ರಪಂಚ ಎಷ್ಟು ವಿಶಾಲವಾಗಿದೆ . ಆದರೂ ನೋಡಿ ಯಾವ ಜನ್ಮದ ಪುಣ್ಯನೋ ಏನೋ ನನ್ನ ಜನ್ಮ ಕನ್ನಡ ಮಣ್ಣಿನಲ್ಲಿ ಚಾಮುಂಡಿ ತಾಯಿಯ ಅನುಗ್ರಹದಿಂದ ಆಕೆ ಅಸುರನನ್ನು ಸಂಹರಿಸಿದ ಊರಲ್ಲೇ ಬೆಟ್ಟದ ತಪ್ಪಲಿಗೆ ಬಹಳ ಸನಿಹದಲ್ಲೇ ಆಯಿತು.
ತಾಯಿಯ ಕೃಪೆ ಚೆನ್ನಾಗಿದೆ ಸಂಪ್ರದಾಯಗಳು ಅಲ್ಪ ಸ್ವಲ್ಪ ಅಳಿಸಿಕೊಂಡು ಹೋಗ್ತಾ ಇದ್ರೂ ಅದರ ಮೂಲ ತತ್ವ ವಯೋಮಾನಕ್ಕೆ ತಕ್ಕಂತೆ ಉಳಿದುಕೊಳ್ಳುತ್ತಲ್ಲ ಎನ್ನುವುದು ಸಂತಸ ತಂದುಕೊಡುತ್ತದೆ.
ದೇವರಿಗೆ ದೀಪ ಹಚ್ಚಿ ವೇದಮಂತ್ರಗಳನ್ನು ಪಠಿಸಿ ಅಕ್ಕಂದಿರನ್ನು ಆರೋಗ್ಯದಿಂದ ನೂರು ಕಾಲ ಚೆನ್ನಾಗಿಟ್ಟು ನಿನ್ನ ಅನುಗ್ರಹಕ್ಕೆ ಪಾತ್ರರಾಗಲಿ ಎಂದು ಕೇಳಿಕೊಂಡೆ . ಚಿಕ್ಕ ಹುಡುಗ ಆದಾಗ ಬೆನ್ನು ತೊಳೆದು ಅವರು ದೇವರಲ್ಲಿ "ಒಡಹುಟ್ಟು" ಚೆನ್ನಾಗಿ ಇರಲಿ ಎಂದು ಕೇಳಿಕೊಳ್ಳುತ್ತಿದ್ರು. ಬದುಕಲ್ಲಿ ವಿಷಮ ಪರಿಸ್ಥಿತಿಗಳು ಬಂದಾಗ ಬುದ್ದಿ ಹೇಗೇಗೋ ವರ್ತಿಸಿ ಮನಸ್ಸು ಕಂಗಾಲಾಗುವುದು ಸಹಜ. ಆಗ ನಾವು ಸಾಮಾನ್ಯವಾಗಿ ದೇವರ ಮೊರೆ ಹೊಕ್ಕಿದರೆ ಒಳ್ಳೆಯದು.
ಪ್ರತೀ ವಾರಕ್ಕೊಮ್ಮೆ ಬೆಟ್ಟ ಹತ್ತಿ ದೇವಸ್ಥಾನಕ್ಕೆ ಹೋಗಿ ನನ್ನ ದುರ್ಬುದ್ಧಿಗಳನ್ನು ತೆಗೆದು ಅಹಂಕಾರದ ಗೋಡೆ ಒಡೆದುಬಿಡು ತಾಯಿ ಎಂದು ತಾಯಿ ಚಾಮುಂಡಿಯನ್ನು ಕೇಳಿಕೊಳ್ಳುತ್ತಿದ್ದ ದಿವಸಗಳವು .
ಈ ದಿನ ವಿಶೇಷವಾಗಿ ಅಕ್ಕಂದಿರು ಬೆನ್ನು ತೊಳೆದು ಹಬ್ಬದ ಊಟ ಅಡುಗೆ ಮಾಡಿ ಬಡಿಸುತ್ತಿದ್ದರು .ಇಷ್ಟವಾಗಿರೋ ಪುಸ್ತಕ ಪೆನ್ನು ತೆಗೆದುಕೊಳ್ಳುವುದಕ್ಕೆ ದಕ್ಷಿಣೆ ಕೂಡ ಕೊಡುತ್ತಿದ್ದರು. ನನ್ನ ತಂದೆ ಕೂಡ ಕಡೆ ಮಾತು ಇದನ್ನೇ ಹೇಳಿ ಹೋದ್ರು. ಅಕ್ಕಂದಿರನ್ನು ಚೆನ್ನಾಗಿ ನೋಡ್ಕೋಪ್ಪಾ ರಾಜ ಅಂತ . ಜನ್ಮ ಕೊಟ್ಟ ತಂದೆ ತಾಯಿಯ ಕಾಲ ಮುಗಿದಿದೆ . ಮಕ್ಕಳು ದೊಡ್ಡವರಾಗ್ತಾ ಇದಾರೆ . ಅಕ್ಕಂದಿರ ಬಾಳು ಚೆನ್ನಾಗಿರ್ಲಿ ನಾಗಣ್ಣ ಎಂದು ಈ ಹಬ್ಬದಲ್ಲಿ ವಿಶೇಷವಾಗಿ ಕೇಳಿಕೊಳ್ಳುತ್ತೇನೆ. ನಮ್ಮ ಹಿರಿಯರು ಎಷ್ಟು ಚೆನ್ನಾಗಿ ಮಾಡಿದರೆ ನೋಡಿ ಇದೆಲ್ಲಾ . ಹಬ್ಬ ಹೀಗೆ ಆಚರಿಸಿಕೊಂಡರೆ ಮಕ್ಕಳಿಗೆ ಚೆನ್ನಾಗಿ ಬಾಂಧವ್ಯ ತಿಳಿಯುತ್ತದೆ.
ವಯೋಮಾನ ಜಾಸ್ತಿ ಆಗ್ತಾ ಆಗ್ತಾ ಬದುಕೇ ಪಾಠ ಕಲಿಸುವುದು ನಿಜ . ಅದಕ್ಕೆ ನಮಗೆ ಬಂದ ಕಷ್ಟಗಳಿಂದ ಪಾಠ ಕಲಿತುಕೊಳ್ಳುವುದು ಮನುಷ್ಯ . ನಾಲ್ಕು ದಿನದ ಬಾಳು ದೇವರ ಕೃಪೆ ಎಂದು ತಿಳಿಯುತ್ತಾ ಹೋಗುತ್ತೆ . ಚೀನಾದಿಂದ ಬಂದ ವೈರಸ್ ಅಷ್ಟಾದರೂ ತಿಳಿಸಿಕೊಟ್ಟಿದೆ . ನಾವು ಮನುಷ್ಯರು ಹೇಗೆ ಬಾಳ್ತಾ ಇದ್ವಿ ಅಂದರೆ ನಮಗೆ ಸಾವೇ ಇಲ್ಲ , ಇಲ್ಲೇ ಇರ್ತೀನಿ ಅನ್ನೋ ರೀತಿ. ಈಗ ನಮ್ಮನ್ನು ನೋಡಿಕೊಳ್ಳುತ್ತಿರುವ ಶಕ್ತಿಯ ಬಗ್ಗೆ ಹೆಚ್ಚಿನ ಅರಿವು ಮೂಡುವುದಕ್ಕೆ ಶುರುವಾಗಿದೆ . ಅಮೆರಿಕದಲ್ಲಂತೂ ನಿತ್ಯ ವೇದ ಪಾಠ ಶುರುವಾಗಿದೆ. ಜನರು ಕಂಗಾಲಾದಾಗ ನಮಗೆ ಹೆಚ್ಚಿನ ತಿಳುವಳಿಕೆ ಅಗತ್ಯ . ಅದಕ್ಕೆ ಸರಿಯಾದ ಗುರುವನ್ನು ನೋಡಿಕೊಂಡು ನಮಗೆ ಇಷ್ಟವಿರುವ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳುವುದು ಒಳ್ಳೆಯ ಮಾರ್ಗ ಎಂದು ನಮ್ಮ ಪುರಾತನ ಗುರು ಶಿಷ್ಯ ಪರಂಪರೆಯೇ ಸಾಕ್ಷಿ . ಹೀಗೆ ಮುಂದುವರಿತಾ ವೇದ ಪಾಠಗಳು ಕಲಿತಾ ಕಲಿತಾ ದಿನ ಕಳೆದಂತೆ ಮನೆಯಲ್ಲಿ ಚಂಡಿಕಾ ಹೋಮ ಮಾಡಲಾಯ್ತು . ಇಟ್ಟ ಸಂಕಲ್ಪ ನನ್ನ ಅರಿಷಡ್ವರ್ಗಗಳನ್ನು( ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯ ) ನಾಶ ಮಾಡಿಬಿಡು ತಾಯಿ ಎಂದು . ಸಾಧನೆಯ ಪಥದಲ್ಲಿ ಮುಂದೆ ಹೋಗುತ್ತಿರುವುದು ನಮಗೆ ತಿಳಿಯಲು ಶುರುವಾಗುತ್ತಾ ಬಂದಿರೋ ಕಾಲಘಟ್ಟ ಇದಾಗಿದೆ.
ಹೀಗೆ ನಿತ್ಯವೂ ಸಾಧನೆ ಮಾಡುವುದಕ್ಕೆ ಪ್ರೇರಣೆಯೇ ನಮ್ಮ ಸನಾತನ ಧರ್ಮದ ಸಂಪ್ರದಾಯಗಳು . ಚಿಕ್ಕ ಹುಡುಗರಿದ್ದಾಗ ಹಿಂದಿನಿಂದ ಬಂದಿರುವ ಮನೆಯ ಸಂಪ್ರದಾಯವನ್ನು ಮಕ್ಕಳಿಗೆ ಪರಿಚಿಸುವುದು ಉತ್ತಮ . ಅದಕ್ಕೆ ನಮ್ಮದು ಅನ್ನುವುದನ್ನು ಅಲ್ಲಗಳೆಯದೆ ಸಂಸ್ಕೃತಿಯನ್ನು ಇಟ್ಟುಕೊಳ್ಳಬೇಕು .
ಶ್ರಾವಣ ಮಾಸದ ಪಂಚಮಿ ತಿಥಿಯಲ್ಲಿ ನಾಗನಿಗೆ ಪೂಜೆ . ಯಾಕೆ ಅಂದರೆ ನಾಗ ಸರ್ಪಕ್ಕೆ ಕಿವಿ ಇಲ್ಲ ಆದರೆ ಮೈ ಎಲ್ಲಾ ಕಿವಿ. ತನ್ನ ಇಡೀ ಶರೀರವನ್ನು ಭೂಮಿತಾಯಿಗೆ ಕೊಟ್ಟುಕೊಂಡು ಹರಿದುಕೊಂಡು ಓಡಾಡುವ ಸರ್ಪ . ಪ್ರಪಂಚದಲ್ಲಿ ಎಲ್ಲಿ ಭೂಕಂಪ ಆಗುತ್ತೆ ಅಂತ ಅದಕ್ಕೆ ಮೊದಲೇ ತಿಳಿಯುತ್ತದೆ . ಅದರ ಗ್ರಹಣಶಕ್ತಿ ಅಷ್ಟು ಚೆನ್ನಾಗಿದೆ . ಆ ಗ್ರಹಣ ಶಕ್ತಿ ನಮ್ಮಲ್ಲಿ ಬರಲಿ ಎಂದು ಅದಕ್ಕೆ ಒಂದು ದಿನ ಪೂಜೆಗೆ ಶ್ರಾವಣ ಮಾಸ ಹಬ್ಬದ ಸಾಲುಗಳೇ ಶುರುವಾಗುವ ಮಾಸದಲ್ಲಿ ನಮ್ಮ ಪೂರ್ವಜರು ನೀಡಿರುತ್ತಾರೆ . ನಮ್ಮ ಗ್ರಹಣ ಶಕ್ತಿ ತೀಕ್ಷ್ಣವಾಗಿ ಆಗಬೇಕು ಎಂದರೆ ನಾವು ಯೋಗ ಸ್ಥಿತಿಯಲ್ಲಿ ಇರಬೇಕು. ಶಿವನ ಕುತ್ತಿಗೆ ಮೇಲೆ ಹಾವು ಏಕಿದೆ ಅಂದರೆ ಶಿವ ಯೋಗ ಸ್ಥಿತಿಯಲ್ಲಿ ಯಾವಾಗಲೂ ಇರ್ತಾನೆ ಎಂದು ತೋರಿಸುವುದಕ್ಕೆ. ಅವನಲ್ಲಿ ಹಾವು ಬರುತ್ತೆ ಅಂತ ಭಯ ಇಲ್ಲ . ಆತಂಕ ಇಲ್ಲವೇ ಇಲ್ಲ ಬಿಡಿ. ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ಆತಂಕ ಭಯ ಇದೆಲ್ಲವೂ ಹುಟ್ಟಿನಿಂದಲೇ ಬಂದಿರೋ ಕಾರಣ ಅದನ್ನು ಹೋಗಲಾಡಿಸಿಕೊಳ್ಳಲು ಈ ಪೂಜೆ .ಆಗ ನಾವು ನಿರ್ಭಯವಾಗಿ ಎಲ್ಲಿ ಅಂದರಲ್ಲಿ ಕೂರಬಹುದು . ಸರ್ಪ ಬಂದರೂ ಏನೂ ಮಾಡುವುದಿಲ್ಲ .ಇದಿಷ್ಟು ನಮ್ಮೊಳಗೇ ಆಗುವ ಬದಲಾವಣೆಯ ಬಗ್ಗೆ . ನಮ್ಮ ಹೊರಗೆ ನನ್ನ ಭಾಂದವ್ಯ ಅಕ್ಕ ತಂಗಿ ಜೊತೆ ಚೆನ್ನಾಗಿರ್ಲಿ ಎಂದು ಹಾಲಿನಿಂದ ಬೆನ್ನು ಸವರಿ ತೊಳೆದ ಹಾಗೆ ಲೆಕ್ಕ ಎಂದು ಗ್ರಹಿಸುವುದು . ಎಲ್ಲಾ ಹಬ್ಬಕ್ಕೂ ಊಟ ವಿಶೇಷ ಅಲ್ವೇ . ಈ ಶ್ರಾವಣ ಮಾಸದಲ್ಲಿ ಏನೇನೆಲ್ಲ ಲಭ್ಯವಿರುತ್ತೋ ಅದರ ಭಕ್ಷ್ಯ ಭೋಜನ ತಯಾರಾಗುತ್ತೆ. ಈ ನಾಗಪಂಚಮಿಯ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರ ಒಡಹುಟ್ಟು ಕೂಡ ಚೆನ್ನಾಗಿರ್ಲಿ ಎಂದು ಶುಭ ಹಾರೈಕೆಗಳು 🙏




No comments:

Post a Comment