Sunday, November 26, 2017

ಕಗ್ಗ 919 - ಕನ್ನಡದ ಭಗವದ್ಗೀತೆ

ಕಗ್ಗ - ಕನ್ನಡದ ಭಗವದ್ಗೀತೆ
--------------------
ಜೀವದುದಯ ರಹಸ್ಯ, ಜೀವವಿಲಯ ರಹಸ್ಯ |
ಜೀವನದ ದೃಶ್ಯ ಮರುವಿನ ಬಿಸಿಲ್ಗುದುರೆ ||
ಭಾವಿಸಲಿದೇ ತತ್ತ್ವ : ಬ್ರಹ್ಮಮಾಯೆಯೆ ವಿಶ್ವ |
ಕೇವಲಾತ್ಮ ಬ್ರಹ್ಮ - ಮಂಕುತಿಮ್ಮ ||
ಜೀವದ+ಉದಯ , ಬಿಸಿಲ್+ಕುದುರೆ , ಭಾವಿಸಲು+ಇದೆ , ಕೇವಲ + ಆತ್ಮ
ವ್ಯಾಖ್ಯಾನ :
ಜೀವವು ಒಂದು ಉಪಾದಿಯಲ್ಲಿ ಹೇಗೆ ಹುಟ್ಟಿಕೊಂಡು ಒಂದು ದಿನ ಕೊನೆಗೊಳ್ಳುತ್ತದೆ ಎನ್ನುವ ವಿಚಾರವೇ ರಹಸ್ಯವಾಗಿದೆ . ಆದರೆ ಈ ಜೀವನದ ದೃಶ್ಯ ಮಾತ್ರ ಒಂದು ಮರುಭೂಮಿಯಲ್ಲಿನ ( ಮರುವಿನ ) ಬಿಸಿಲ್ಗುದುರೆಯ ಹಾಗೆ ಕಾಣುತ್ತಿದೆ . ಭಾವಿಸಲು ಇದೇ ತತ್ವ - ವಿಶ್ವವೆಲ್ಲವೂ ಬ್ರಹ್ಮನು ಸೃಷ್ಟಿಸಿದ ಮಾಯಾಲೋಕ . ಕೇವಲ ಆತ್ಮವೇ ಬ್ರಹ್ಮ . ಇನ್ನೂ ಹೆಚ್ಚು ವಿವರಣೆ ನೀಡುವುದಾದರೆ ನಮ್ಮ ದೇಹ ಬುದ್ದಿ ಅಹಂಕಾರವೆಂಬುದು ಪ್ರಕೃತಿ ಅಂದರೆ ಅದು ನಿಧಾನವಾಗಿ ಬದಲಾವಣೆಯಾಗಿ ನಶಿಸಿಹೋಗುವಂತಹದ್ದು. ಆದರೆ ಆತ್ಮಕ್ಕೆ ಸಾವಿಲ್ಲ , ಅದು ನಿರ್ಗುಣ ನಿರಾಕಾರ ಸಗುಣ ಸರ್ವವ್ಯಾಪಿ - ಎಲ್ಲೆಲ್ಲೂ ಬೆಳಗುತ್ತಿರುವ ಜ್ಯೋತಿ. ಇದನ್ನೇ ಜಗದ್ಗುರು ಭಗವತ್ಪಾದರಾದ ಆದಿಶಂಕರರು " ಅಹಂ ಬ್ರಹ್ಮಾಸ್ಮಿ " ಎಂದು ವಿಶ್ವಕ್ಕೆ ತಿಳಿಸಿರುವ ಅದ್ವೈತ ಸಿದ್ದಾಂತ .

No comments:

Post a Comment