Monday, December 10, 2018

ಕನ್ನಡ ಮತ್ತು ಕನ್ನಡ ಕಾರ್ಯಕ್ರಮಗಳು ಯಾಕೆ ಬೇಕು ?

ಕನ್ನಡ ಮತ್ತು ಕನ್ನಡ ಕಾರ್ಯಕ್ರಮಗಳು ಯಾಕೆ ಬೇಕು ?
-------------------------------------
ಮೊಟ್ಟಮೊದಲಿಗೆ ೨೦೦ ವಾರಗಳು ಸತತವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಬೆಂಗಳೂರು ವಾಯ್ಸ್ ಕಾರ್ಯಕ್ರಮದ ಪದಾಧಿಕಾರಿಗಳಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು ಮತ್ತು ಅಭಿವಂದನೆಗಳು .
ಕಾರ್ಯಕ್ರಮಕ್ಕೆ ಕರೆ ಮಾಡಿ ಅಭಿನಂದಿಸಿದೆ. ಬೆಂಗಳೂರು ವಾಯ್ಸ್ ಅಂದ್ರೆ ನಿಮಗೆ ಏನನ್ನಿಸುತ್ತದೆ ಎಂದು ರಘು ಕೇಳಿದರು . ನನ್ನ ಹೃದಯದ ಮಿಡಿತ ಎಂದು ಉತ್ತರಿಸಿದೆ . ಬೆಳಗ್ಗೆ ಹಾಸಿಗೆಯಿಂದ ಮೇಲೇಳುತ್ತಿದ್ದ ಹಾಗೆಯೇ ಉಸಿರಿನಲ್ಲಿ ಬೆಸೆದುಹೋಗಿರುವ ನಮ್ಮ ಮಾತೃ ಭಾಷೆಯಿಂದಲ್ಲವೇ ಒಹ್ ಬೆಳಗಾಗಿದೆ ಎಂದು ಭಾವನೆಗೆ ಬರುವುದು. ಸಂಸ್ಕೃತ ಭಾಷೆಯಲ್ಲಿ ಕರಾಗ್ರೇ ವಸತೇ ಲಕ್ಷ್ಮಿ ...ಶ್ಲೋಕವನ್ನು ಹೇಳಿ ಜಗನ್ಮಾತೆಯನ್ನು ನೆನೆಸಿ ನಮ್ಮ ಕರ ದರ್ಶನ ಮಾಡುತ್ತೇವೆ. ಅ ಶ್ಲೋಕದರ್ಥವನ್ನು ಮತ್ತೆ ಭಾವನೆಗಳನ್ನು ಕನ್ನಡದಲ್ಲಿ ಮನನ ಮಾಡುತ್ತೇವೆ. ಅಲ್ಲಿಂದ ಶುರುವಾಗಿ ರಾತ್ರಿ ಮಲಗುವುದಕ್ಕೆ ಮುಂಚೆ ನಮ: ಶಿವಾಯ, ನಮೋ ನಾರಾಯಣಾಯ ಎಂದು ಕಡೆಯ ಮಾತು ಹೇಳಿಕೊಂಡು ಮಲಗುವವರೆಗೆ ಸಹಸ್ರಾರು ಚಿಂತನೆಗಳು ಮಾತೃ ಭಾಷೆಯಲ್ಲಿಯೇ ತಾನೇ ಉಕ್ಕುವುದು. ವ್ಯವಹಾರಕ್ಕೆ ಆಂಗ್ಲ ಬಳಸಿದರೂ ಕೂಡ ಅದರ ತರ್ಜುಮೆ ಕೆಲಸ ಮೆದುಳಿನಲ್ಲಿ ಕನ್ನಡದಲ್ಲಿ ತಾನೇ.

ಬೆಂಗಳೂರು ವಾಯ್ಸ್ ನವರು ನನ್ನನು ೨-೩ ಅವಕಾಶ ಕೊಟ್ಟು ರೇಡಿಯೋ ಜಾಕಿ ಕೆಲ್ಸಕ್ಕೆ ಕರ್ದಿದ್ರು . ಹೋಗಿ ಮಾಡಿಕೊಟ್ಟೆ . ತುಂಬಾ ಸಂತೋಷವಾಗಿತ್ತು ಕೂಡ .ಸ್ಟುಡಿಯೋದಲ್ಲಿ ಕುಳಿತು ಲೈವ್ ನೇರ ಕನ್ನಡ ಕಾರ್ಯಕ್ರಮ ಕನ್ನಡದಲ್ಲಿ ಮಾತನಾಡುವ ಖುಷಿಯೇ ಬೇರೆ. ಆ ಅನುಭವ ಮತ್ತೆ ಮತ್ತೆ ಬೇಕು ಎಂದು ಕೂಡ ಅನಿಸುತ್ತದೆ . 

ಸತೀಶ್ ಎಂದು ಒಬ್ಬರು ಕರೆ ಮಾಡಿದ್ದರು . ಆಮೇರಿಕದಲ್ಲಾದರೂ ಸರಿ ಅಥವಾ ಬೆಂಗಳೂರಿನಲ್ಲಾದರೂ ಸರಿ ಕನ್ನಡ ಉಳಿವು ಅಳಿವಿನವರಗೆ ಇವತ್ತು ನಾವು ಬಂದು ಕುಳಿತಿದ್ದೇವೆ. ಅಳಿವು ಉಳಿವಿನ ಪ್ರಶ್ನೆಗೆ ರಘು ಅವರು ಉತ್ತರ ನೀಡಿದರು . ಸಿಕ್ಕ ಸಮಯದಲ್ಲಿ ಅವರು ಬೆಂಗಳೂರು ವಾಯ್ಸ್ ನ ಉದ್ದೇಶ ಏನು , ಯಾವ ಕಾರಣಕ್ಕಾಗಿ ಅಸ್ತಿತ್ವಕ್ಕೆ ಬಂತು ಎನ್ನುವ ವಿಷಯಕ್ಕೆ ಉತ್ತರಿಸಿದರು.

ಬಹಳಷ್ಟು ವಿಷಯವಿದೆ . ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಅಂತ ನಮ್ಮಲ್ಲಿ ಮಾತಿದೆ . ತಾಯಿ ತಂದೆಯಾಗಿ ನಾವು ನಮ್ಮ ಮಕ್ಕಳ ಜೊತೆ ಕನ್ನಡದಲ್ಲೇ ಕಡ್ಡಾಯವಾಗಿ ವ್ಯವಹರಿಸಬೇಕು ಆಮೇರಿಕದಲ್ಲಾದರೂ ಸರಿಯೇ ಬೆಂಗಳೂರಿನಲ್ಲಾದರೂ ಸರಿಯೇ ಮಕ್ಕಳಿಗೆ ಬೆಂಗಳೂರು ವಾಯ್ಸ್ ನಂತ ಕನ್ನಡ ಕಾರ್ಯಕ್ರಮಗಳನ್ನು ಕೇಳಿಸಬೇಕು , ಏನ್ ಅರ್ಥ ಆಯಿತು ಸಾಧಕರು ಯಾರು ಬಂದಿದ್ರು ಹೀಗೆ ಎಲ್ಲಾ ವಿಷಯಗಳನ್ನು ಮಕ್ಕಳ ಹತ್ರ ಕನ್ನಡದಲ್ಲೇ ಕಾರ್ಯಕ್ರಮವಾದ ಮೇಲೆ ಮಾತನಾಡಬೇಕು .

ಕನ್ನಡ ಕಲಿಗೆ ಹೋಗಿ ಕನ್ನಡ ಕಲಿಯುವುದರ ಜೊತೆಗೆ ಶನಿವಾರ ದಿವಸ ಈ ಕೆಲಸ ಆಗಬೇಕು. ಕನ್ನಡದ ಹೆಸರಾಂತ ಕವಿಗಳನ್ನು ಮತ್ತವರ ನುಡಿಮುತ್ತುಗಳನ್ನು ತಂದೆತಾಯಂದಿರು ತಿಳಿಸಿಕೊಡಬೇಕು. ಅವರು ಸಾಹಿತ್ಯ ಲೋಕದಲ್ಲಿ ಮಾಡಿದ ಸಾಧನೆಗಳನ್ನು ಪರಿಚಯಿಸುವುದರ ಮೂಲಕ ಕನ್ನಡದ ಸಾಹಿತ್ಯದ ಮೇಲೆ ಒಂದಿಷ್ಟು ಪ್ರೀತಿ ಬೆಳೆಸಿಕೊಳ್ಳಲು ನಮ್ಮೆಲ್ಲರನ್ನೂ ಆಕರ್ಷಿಸುವ ಕೆಲಸ ಕಾರ್ಯಗಳಾಗಬೇಕು. ಎಲ್ಲಾ ಕಲಿಕೆ ಶಾಲೆಯಲ್ಲಿ ಸಿಗುವುದಿಲ್ಲ . ಆದರೆ ಕಲಿಯುವುದಕ್ಕೆ ಉತ್ಸಾಹ ಪ್ರೀತಿ ಮತ್ತು ಪೂರಕವಾದ ವಾತಾವರಣ ಶಾಲೆಯಲ್ಲಿ ಸಿಗುತ್ತದೆ . ಕನ್ನಡ ಕಲಿಯುವಿಕೆಯಲ್ಲಿ ಮನೆಯಲ್ಲಿ ಹೆಚ್ಚಿನ ಕೆಲಸವಾಗಬೇಕು. ಕನ್ನಡ ಪತ್ರಿಕೆಗಳನ್ನು ಇಂಟರ್ನೆಟ್ ಅಲ್ಲಿ ದಿನಕ್ಕೆ ೪ ಸಾಲುಗಳಾದರು ಓದಿದರೆ ಒಳ್ಳೆಯದಲ್ಲವೇ . ಇನ್ನೊಬ್ಬರಿಗೆ ಹೇಳುವ ಮುಂಚೆ ತಂದೆ ತಾಯಂದು ನಾವು ಓದುವುದು ತುಂಬಾ ಸೂಕ್ತ . ಅಪ್ಪ ಅಮ್ಮ ಕನ್ನಡವನ್ನು ಓದಿ ನಮ್ಮ ಮಾತಿನಲ್ಲಿ ಪದಬಳಕೆಯನ್ನು ಉಳಿಸಿಕೊಂಡರೆ ಇನ್ನೂ ಸಂತೋಷ. ಮಕ್ಕಳು ಇದನ್ನೆಲ್ಲಾ ಗಮನಿಸುತ್ತಿರುತ್ತಾರೆ.

ವಿಜ್ನಾರ್ಥ್ ಎಂಬುವರು ಅಮೇರಿಕಾದಲ್ಲಿ ಹುಟ್ಟಿ ಬೆಳೆದು ರೇಡಿಯೋ ಕಾರ್ಯಕ್ರಮಕ್ಕೆ ಕರೆ ಮಾಡಿ ಕನ್ನಡದಲ್ಲಿ ಮಾತನಾಡಿದರು . ಈ ರೀತಿ ಬೇರೆ ಮಕ್ಕಳು ಕನ್ನಡದಲ್ಲಿ ಮಾತನಾಡುವ ಕಲೆ ಬೆಳೆಸಿಕೊಳ್ಳಬೇಕು. ತಂದೆತಾಯಂದಿರು ಕನ್ನಡ ಪುಸ್ತಕಗಳನ್ನು ಮನೆಯಲ್ಲಿ ತಂದಿಡಬೇಕು , ಓದಬೇಕು ಬರೆಯಬೇಕು .. ಕನ್ನಡವನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕಾದರೆ ಕನಿಷ್ಠ ಇಷ್ಟು ಕೆಲಸ ಆಗಬೇಕಾಗಿದೆ. ತದನಂತರವೇ ನಮ್ಮ ಭಾಷೆ ನೆಲ ಜಲ ನಮ್ಮವರೆಂಬ ಅಭಿಮಾನ ಆಗ ಅಪಾರವಾಗಿ ಉಕ್ಕಿಬರುವುದು ಕನ್ನಡ ಸಂಕೃತಿಯ ಪರಿಚಯವಾಗುವುದು ಮತ್ತು ಭಾರತವನ್ನಿರುವುದಕ್ಕೆ ಸಹಾಯಮಾಡುವುದು . ಮಾತೃಭಾಷೆಯನ್ನು ಬಳಸದೆ ಹೋದರೆ ನಿಧಾನಗತಿಯಲ್ಲಿ ನಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವ ಅಪಾಯವಿದೆ .
-ಸುಬ್ಬು ಪದ್ಮನಾಭ
https://www.facebook.com/photo.php?fbid=10218150391369669&set=a.4010351735588&type=3&theater&notif_t=feedback_reaction_generic&notif_id=1544295003325706

No comments:

Post a Comment